Monday, November 23, 2009

Bhimeshwara temple neelagunda

ನೀಲಗುಂದ ತಲುಪಿ ಭೀಮೇಶ್ವರ ದೇವಾಲಯದ ದಾರಿಯಲ್ಲಿ ತೆರಳುತ್ತಿರುವಾಗ ಧೂಳು ತುಂಬಿದ ಮಣ್ಣಿನ ದಾರಿ ಊರಿನಿಂದ ಹೊರಗೆಲ್ಲೋ ತೆರಳುತ್ತಿತ್ತು. ಆದರೆ ಮುಂದೆ ಕಾಣಸಿಗಲಿರುವ ಅದ್ಭುತ ದೃಶ್ಯದ ಎಳ್ಳಷ್ಟು ಕಲ್ಪನೆಯೂ ನಮಗಿರಲಿಲ್ಲ. ಬೆಟ್ಟದ ಬದಿಯಲ್ಲೇ ರಸ್ತೆ ಇತ್ತು. ಸಣ್ಣ ದಿಬ್ಬವೊಂದನ್ನೇರಿದ ಕೂಡಲೇ ಕೆರೆಯ ತಟದಲ್ಲಿ ಅನತಿ ದೂರದಲ್ಲಿ ರಾರಾಜಿಸುತ್ತಿದ್ದ ಭೀಮೇಶ್ವರ ದೇವಾಲಯದ ಬಲೂ ಸುಂದರ ದೃಶ್ಯ.


ಅಮೃತ ಕೆರೆ ಎಂದು ಈ ಕೆರೆಯನ್ನು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಇತ್ತೀಚೆಗಷ್ಟೆ ಪುರಾತತ್ವ ಇಲಾಖೆ ಭೀಮೇಶ್ವರ ದೇವಾಲಯವನ್ನು ತನ್ನ ಸುಪರ್ದಿಗೆ ಪಡೆದಿದ್ದು ಸುತ್ತಲೂ ಚಪ್ಪಡಿ ಕಲ್ಲು ಹಾಸುವ ಕಾರ್ಯ ನಡೆಯುತ್ತಿದೆ. ಶ್ರಾವಣ ಮಾಸದ ಕೊನೆಯ ಸೋಮವಾರ ಇಲ್ಲಿಗೆ ಸಾಕಷ್ಟು ಜನರು ಆಗಮಿಸುತ್ತಾರೆ.


ಕೆರೆಯೊಳಗೆ ಚಾಚಿರುವ ಸಣ್ಣ ದಿಬ್ಬದ ಮೇಲೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಕಲ್ಯಾಣಿ ಚಾಲುಕ್ಯರಿಂದ ನಿರ್ಮಿತಗೊಂಡು ಹೊಯ್ಸಳರಿಂದ ಅಭಿವೃದ್ಧಿಗೊಂಡ ದೇವಾಲಯ ಎನ್ನಲಾಗುತ್ತಿದೆ. ಈ ತ್ರಿಕೂಟಾಚಲ ದೇವಾಲಯದ ಪ್ರಮುಖ ಗರ್ಭಗುಡಿಯ ಮೇಲೆ ಮಾತ್ರ ಗೋಪುರವಿದ್ದು, ಸುಂದರ ಕೆತ್ತನೆಯಿರುವ ಈ ಗೋಪುರದ ರಚನೆ ಪಕ್ಕಾ ಹೊಯ್ಸಳ ಶೈಲಿಯಲ್ಲಿದೆ. ದೇವಾಲಯ ಕೆರೆಗೆ ಮುಖ ಮಾಡಿ ಇದೆ ಮತ್ತು ಕೆರೆಗೆ ಇಳಿಯಲು ನಾಲ್ಕಾರು ಮೆಟ್ಟಿಲುಗಳಿವೆ.


ಗರ್ಭಗುಡಿ, ಅಂತರಾಳ, ನವರಂಗ ಮತ್ತು ಮುಖಮಂಟಪಗಳನ್ನು ಹೊಂದಿರುವ ದೇವಾಲಯಕ್ಕೆ ಪ್ರವೇಶ ಮುಖಮಂಟಪದ ಎರಡೂ ಪಾರ್ಶ್ವಗಳಿಂದ ಇದೆ. ಮುಖಮಂಟಪಕ್ಕೆ ತಾಗಿಕೊಂಡೇ ಖಾಲಿ ಗರ್ಭಗುಡಿಯೊಂದಿದೆ. ಕೆಲವೊಂದು ದೇವಾಲಯಗಳಲ್ಲಿ ಈ ರೀತಿ ನಿರ್ಮಾಣವಿರುತ್ತದೆ. ಮುಖಮಂಟಪದಲ್ಲೇ ಗರ್ಭಗುಡಿಯೊಂದಿರುತ್ತದೆ ಮತ್ತು ಈ ಗರ್ಭಗುಡಿ ಸೂರ್ಯನಾರಾಯಣ ದೇವರದ್ದಾಗಿದ್ದು ಪ್ರಮುಖ ಗರ್ಭಗುಡಿಗೆ ಮುಖ ಮಾಡಿ ಇರುತ್ತದೆ.


ನಂದಿ ಮೂರ್ತಿ ನವರಂಗದಲ್ಲಿದೆ ಮತ್ತು ಅದು ಮೂಲ ನಂದಿಯ ವಿಗ್ರಹದಂತೇ ಕಾಣದೇ, ಎಲ್ಲಿಂದಲೋ ತಂದು ಇರಿಸಲಾಗಿರುವಂತೆ ತೋರುತ್ತಿತ್ತು. ನವರಂಗದ ದ್ವಾರದ ಇಕ್ಕೆಲಗಳಲ್ಲಿ ಜಾಲಂಧ್ರಗಳ ರಚನೆ ಸುಂದರವಾಗಿದೆ. ಗರ್ಭಗುಡಿಯಲ್ಲಿ ಪಾಣಿಪೀಠದ ಮೇಲೆ ಸುಂದರ ಶಿವಲಿಂಗವಿದೆ. ಅಂತರಾಳದ ದ್ವಾರ ೫ ತೋಳಿನದಾಗಿದ್ದು ಅಭೂತಪೂರ್ವ ಕೆತ್ತನೆಯನ್ನು ಹೊಂದಿದ್ದು ಬಹಳ ವಿಶಿಷ್ಟವಾಗಿದೆ. ದ್ವಾರದ ಇಕ್ಕೆಲಗಳಲ್ಲಿ ಸುಂದರ ಕೆತ್ತನೆಯಿರುವ ಜಾಲಂಧ್ರಗಳು, ನಂತರ ಇನ್ನೂ ಸುಂದರ ಕೆತ್ತನೆಯಿರುವ ಕಲ್ಲಿನ ಕಂಬಗಳು. ಕೆಳಗೆ ದ್ವಾರಪಾಲಕರಂತೆ ದೇವ ದೇವಿಯರ ಕೆತ್ತನೆ. ಇಷ್ಟೇ ಅಲ್ಲದೆ ದ್ವಾರದ ಮೇಲೆಯೂ ಅದ್ಭುತ ಕೆತ್ತನೆ ಕೆಲಸವಿತ್ತು. ಈ ಕೆತ್ತನೆಗಳು ಯಾವುದೋ ಮಹತ್ವದ ಪೌರಾಣಿಕ ಘಟನೆಯನ್ನು ಬಿಂಬಿಸುತ್ತಿರಬೇಕು...ಆದರೆ ವಿವರಿಸಲು ಅಲ್ಲಿ ಯಾರೂ ಇರಲಿಲ್ಲ.


ಅಂತರಾಳದ ದ್ವಾರದ ಇಕ್ಕೆಲಗಳಲ್ಲಿ ಕವಾಟಗಳಿವೆ. ಒಂದರಲ್ಲಿ ಗಣೇಶನ ವಿಗ್ರಹವಿದ್ದರೆ ಮತ್ತೊಂದರಲ್ಲಿರುವ ವಿಗ್ರಹ ಯಾವುದೆಂದು ಗೊತ್ತಾಗಲಿಲ್ಲ. ನವರಂಗದಲ್ಲಿ ನಾಲ್ಕು ಸುಂದರ ಕಲ್ಲಿನ ಕಂಬಗಳಿವೆ. ಸಮೀಪದಲ್ಲೆಲ್ಲೋ ದೊರಕಿರುವ ಸುಂದರ ಮತ್ತು ವಿಶಿಷ್ಟ ವಿಗ್ರಹವೊಂದನ್ನು ಅಲ್ಲೇ ಇರಿಸಲಾಗಿದೆ. ಉಳಿದೆರದು ಗರ್ಭಗುಡಿಗಳೊಳಗೆ ಇಣುಕಿದರೆ ಖಾಲಿ ಖಾಲಿ.


ದೇವಾಲಯ ನಿರೀಕ್ಷಿಸಿದ್ದಕ್ಕಿಂತ ಎಷ್ಟೋ ಚೆನ್ನಾಗಿತ್ತು. ಆ ಪರಿಸರವನ್ನಂತೂ ಮರೆಯಲಸಾಧ್ಯ.

2 comments: