Sunday, November 15, 2009
Pathrode made from Araceae(kesu)
ಕೆಸು Araceae ವಂಶಕ್ಕೆ ಸೇರಿದ, ಏಷಿಯಾದ ಜವುಗು ಪ್ರದೇಶಗಳಲ್ಲಿ ಕಂಡು ಬರುವ, ಏಕದಳ ಸಸ್ಯ. ಎಲೆಗಳು ಹೃದಯಾಕಾರದಲ್ಲಿ ಇದ್ದು, ಎಲೆಯ ಮೇಲ್ಮೈ ತೈಲ ಸವರಿದಂತೆ ನುಣುಪಾಗಿದ್ದು, ನೀರಿನ ಹನಿ ಜಾರುವಂತಿರುತ್ತದೆ. ನೆಲದೊಳಗೆ ಹುದುಗಿರುವ ಗಡ್ಡೆ, ನೆಲದ ಮಟ್ಟದಿಂದಲೇ ಕವಲೊಡೆದ ಮೃದುವಾದ ಕಾಂಡ, ಕಾಂಡಕ್ಕೊಂದೇ ಎಲೆ ಈ ಗಿಡದ ಸಾಮಾನ್ಯ ರೂಪ.
ಕೆಸುವಿನಲ್ಲೇ ಹಲವು ಪ್ರಭೇದಗಳಿದ್ದರೂ ನಮ್ಮ ಪ್ರಯೋಜನ ದೃಷ್ಟಿಯಿಂದ ಬೆಳಿ ಕೆಸು, ಕರಿ ಕೆಸು, ಮರ ಕೆಸು ಈ ಹೆಸರುಗಳನ್ನಷ್ಟೇ ತಿಳಿದುಕೊಂಡರೆ ಸಾಕು. ಬಿಳಿ ಕೆಸು ತಿಳಿ ಹಸುರು ಬಣ್ಣದ ಕಾಂಡ ಮತ್ತು ಎಲೆಯಂಚು ಹೊಂದಿದ್ದರೆ, ಕರಿ ಕೆಸು ಕಡು ಕಪ್ಪು ಬಣ್ಣವನ್ನು ಹೋಲುವ ಕಾಂಡ, ಎಲೆಯಂಚು ಹೊಂದಿದೆ. ಮರದ ಮೇಲೆ ಆರ್ಕಿಡ್ನಂತೆ ಬೆಳೆಯುವುದು ಮರ ಕೆಸು. ಉಡುಪಿ, ದ.ಕ.ಗಳಲ್ಲಿ ತಯಾರಿಸುವ ಪತ್ರೊಡೆಗೆ ಇವೇ ಎಲೆಗಳನ್ನು ಅನಾದಿ ಕಾಲದಿಂದ ಬಳಸಿಕೊಂಡು ಬರುತ್ತಿದ್ದಾರೆ. ಗುಜರಾತಲ್ಲೂ ಈ ಬಗೆಯ ಖಾದ್ಯ ಮಾಡಿ ಅದಕ್ಕೆ "ಪಾತ್ರ" ಎಂಬ ಹೆಸರನ್ನು ಇಟ್ಟಿದ್ದಾರಾದರೂ, ಎರಡರ ರುಚಿಯನ್ನೂ ಸವಿದ ನನ್ನ ನಾಲಿಗೆ ನಿಶ್ಪಕ್ಷಪಾತಿಯಾಗಿ ಪತ್ರೊಡೆಯತ್ತ ಒಲವು ತೋರಿಸಿದ್ದರಿಂದ "ಪಾತ್ರ"ವನ್ನು ಕಡೆಗಾಣಿಸಲಾಗಿದೆ. ಮೇಲೆ ತಿಳಿಸಿದ ಎಲೆಗಳನ್ನು ರುಚಿಯ ದೃಷ್ಟಿಯಿಂದ, ಮೃದುತ್ವದ ದೃಷ್ಟಿಯಿಂದ ಸಮೀಕರಣದಲ್ಲಿ ಹೀಗೆ ವಿವರಿಸಬಹುದು: ಬಿಳಿ ಕೆಸು < ಕರಿ ಕೆಸು < ಮರ ಕೆಸು.
ಪತ್ರೊಡೆಯಲ್ಲಿ ಎರಡು ವಿಧಗಳುಂಟು, ಮೊದಲನೆಯದು ದೋಸೆ ಕಲ್ ಪತ್ರೊಡೆ, ಎರಡನೆಯದು ಪತ್ರೊಡೆ. ಇವೆರಡನ್ನೂ ಮಾಡುವ ವಿಧಾನವನ್ನು ಹಂತ ಹಂತವಾಗಿ ತಿಳಿದುಕೊಳ್ಳೋಣ.
ದೋಸೆ ಕಲ್ ಪತ್ರೊಡೆ:
೧. ದೋಸೆ ಮೊದಲಾದ ತಿಂಡಿಗೆ ಬಳಸುವ ಅಕ್ಕಿಯನ್ನು ಎರಡು ಘಂಟೆಗಳಷ್ಟು ಕಾಲ ನೀರಿನಲ್ಲಿ ನೆನೆಹಾಕಿ.
೨. ತೋಟಕ್ಕೆ ತೆರಳಿ ಕೆಸುವಿನ ಎಲೆಯನ್ನಾಯ್ದುಕೊಂಡು ಬನ್ನಿ. ಎಲೆ ತೀರ ಬಲಿತದ್ದಾಗಿರಬಾರದು. ಸ್ವಲ್ಪ ಎಳೆಯ ಎಲೆಯಾದರೆ ಚೆನ್ನಾಗಿ ಬೇಯುವುದೂ ಅಲ್ಲದೇ, ತಿಂದ ನಂತರ ಬಾಯಿ ತುರಿಕೆಯಾಗುವ ಸಂಭವವೂ ಕಡಿಮೆ.
೩. ಎಲೆಯನ್ನು ಚೆನ್ನಾಗಿ ತೊಳೆದು, ದಂಟನ್ನು ಎಲೆಯಿಂದ ಬೇರ್ಪಡಿಸಬೇಕು. ಎಲೆಯ ಕೆಳಭಾಗದಲ್ಲಿರುವ ದಂಟುಗಳನ್ನೂ ಕೂಡ ಇದೇ ರೀತಿ ಬೇರ್ಪಡಿಸಬೇಕು.
೪. ಸುಮಾರು ಒಂದು ಕಡಿಯಷ್ಟು ತೆಂಗಿನ ತುರಿಯನ್ನು ತಯಾರಿಸಿಕೊಳ್ಳಬೇಕು.
೫. ನೆನೆಸಿದ ಅಕ್ಕಿ, ತೆಂಗಿನ ತುರಿ, ೨ ಚಮಚದಷ್ಟು ಜೀರಿಗೆ, ೨ ಚಮಚದಷ್ಟು ಕೊತ್ತುಂಬರಿ ಬೀಜ, ಒಂದು ಚಮಚ ಅರಶಿನ, ೧೦ ಒಣ ಮೆಣಸಿನ ಕಾಯಿ, ಸ್ವಲ್ಪ ಹುಣಸೇ ಹಣ್ಣನ್ನು ದೋಸೆಯ ಹಿಟ್ಟಿನ ಹದಕ್ಕೆ ಅರೆದುಕೊಳ್ಳಬೇಕು. ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
೬. ಕೆಸುವಿನ ಎಲೆಯ ಹಿಂಭಾಗಕ್ಕೆ ಹದವಾಗಿ ಈ ಮಿಶ್ರಣವನ್ನು ಹಚ್ಚುತ್ತಾ, ಮಡಿಸುತ್ತಾ, ಸುರುಳಿಯಾಗಿ ಸುತ್ತಬೇಕು.
೭. ಗಾಲಿಗಳಂತೆ ಇವನ್ನು ಕತ್ತರಿಸಿ ಇಟ್ಟುಕೊಳ್ಳಬೇಕು.
೮. ಹದವಾದ ಬೆಂಕಿ ಹೊತ್ತಿಸಿ ಒಲೆ ಮೇಲಿಟ್ಟ ದೋಸೆ ಕಾವಲಿಗೆ ಎಣ್ಣೆ ಹಚ್ಚಿ, ಈ ಗಾಲಿಗಳನ್ನು ಒಂದೊಂದಾಗಿ ಮೇಲೆ ತಿಳಿಸಿದ ಮಿಶ್ರಣದಲ್ಲಿ ಅದ್ದಿ ಕಾವಲಿ ಮೇಲಿಡಬೇಕು. ಕಾವು ಜಾಸ್ತಿಯಿರುವ ಮಧ್ಯ ಭಾಗ ಬೇಗನೆ ಕರಟಿ ಹೋಗುವ ಸಂಭವ ಇರುವುದರಿಂದ, ಕಾವಲಿ ಮೇಲೆ ಗಾಲಿಗಳನ್ನು ಇಡುವಾಗ ಹೊರವರ್ತುಲದಿಂದ ಆರಂಭಿಸಬೇಕು.
೯. ಕಾವಲಿಗೆ ಎಣ್ಣೆ ಹಚ್ಚುವಾಗ ಬೇರೆ ಎಣ್ಣೆಯನ್ನು ಬಳಸಿದರೂ, ತೆಗೆಯುವ ಕೊಂಚ ಮೊದಲು ತೆಂಗಿನೆಣ್ಣೆ ಹಾಕುವುದು ಸೂಕ್ತ.
೧೦. ಹದವಾಗಿ ಬೀಳುತ್ತಿರುವ ಮಳೆಯ ತಾಳದೊಂದಿಗೆ, ಕೆಂಪಗೆ ಕಾದ, ಬಿಸಿ ಬಿಸಿಯಾದ ದೋಸೆ ಕಲ್ ಪತ್ರೊಡೆ ಅವರ್ಣನೀಯವಾದ ಅನುಭವವನ್ನು ಒದಗಿಸುವುದು.
ಪತ್ರೋಡೆ:
"ದೋಸೆ ಕಲ್ ಪತ್ರೊಡೆ"ಮಾಡುವ ವಿಧಾನದ ೬ನೇ ಹಂತದವರೆಗೆ ಅನುಸರಿಸಿ(ಎಲೆಗೆ ಹಿಟ್ಟು ಹಚ್ಚುವ ಮೊದಲು, ಹಿಟ್ಟಿಗೆ ಸ್ವಲ್ಪ ಬೆಲ್ಲ ಬೆರಸಬೇಕು)
೭. ಸುರುಳಿಯ ಮುಂಭಾಗಕ್ಕೂ ಮಿಶ್ರಣವನ್ನು ಸವರಿ, ಇಡ್ಲಿ ಬೇಯಿಸುವಂತೆ ಇಡ್ಲಿ ಅಟ್ಟದಲ್ಲಿ ಬೇಯಿಸಬೇಕು.
೮. ಬಿಸಿ ಬಿಸಿಯಾದ ಪತ್ರೊಡೆಯನ್ನು ಬೆಕ್ಕಿನ ಮಂಡೆಗಾತ್ರದ ಬೆಣ್ಣೆಯೊಂದಿಗೋ ಅಥವಾ ತೆಂಗಿನೆಣ್ಣೆ ಸವರಿಯೋ ತಿನ್ನಬಹುದು.
೯. ಹೆಚ್ಚಿಗೆ ಉಳಿದಿದ್ದನ್ನು ಮರುದಿನ ಚಿಕ್ಕದಾಗಿ ಕತ್ತರಿಸಿ, ಸಾಸಿವೆ, ಕರಿ ಬೇವು, ಒಣ ಮೆಣಸಿನ ಒಗ್ಗರಣೆಯೊಂದಿಗೆ ತುರಿದ ಕಾಯಿ ಸೇರಿಸಿ ಹುರಿದು, ಸಕ್ಕರೆಯನ್ನು ಉದುರಿಸಿ ತಿಂದರೆ ಇನ್ನೊಂದು ಬಗೆಯ ಸುಖ ಪ್ರಾಪ್ತಿಯಾಗುವುದು.
ಈ ಮೇಲಿನ ಎರಡೂ ವಿಧಗಳು ಕೆಲವೊಮ್ಮೆ ನಾಲಗೆ, ಗಂಟಲು ತುರಿಕೆ ಉಂಟು ಮಾಡುವ ಸಂದರ್ಭ ಇರುವುದರಿಂದ, ಇದರ ಶಮನಕ್ಕಾಗಿ ಹುಣಸೇ ಹಣ್ಣು, ಬೆಲ್ಲ ಬಳಿಯಲ್ಲಿಟ್ಟುಕೊಳ್ಳುವುದು ಉತ್ತಮ. ಹೆಚ್ಚಾಗಿ ಸುಳ್ಳು ಹೇಳುವ ಅಭ್ಯಾಸ ಇರುವವರಿಗೆ ತುರಿಕೆ ಜಾಸ್ತಿ ಅಂತ ನನ್ನ ಅಮ್ಮ ಹೇಳುತ್ತಾಳಾದ್ದರಿಂದ, ಸಹಜವೆಂಬಂತೆ ಜೀವಮಾನದಲ್ಲಿ ನನಗೆ ಒಮ್ಮೆಯೂ ಪತ್ರೊಡೆ ತಿಂದು ತುರಿಕೆ ಬಂದದ್ದಿಲ್ಲ.
ಬಣ್ಣ ಬಣ್ಣದ ಕೆಸು ನೋಡಲು ಅಂದವಾಗಿರುವುದಾದರೂ ತಿನ್ನಲು ಯೋಗ್ಯವಲ್ಲ.
ನಿಮ್ಮ ಮನೆ ಅಥವಾ ಪಕ್ಕದ ಮನೆ ತೋಟದಲ್ಲಿ ಕೆಸು ಇಲ್ಲವಾದಲ್ಲಿ, ದೋಸೆ ಕಲ್ ಪತ್ರೊಡೆಯ ಹಿಟ್ಟನ್ನು ಉಪಯೋಗಿಸಿ ಹೀರೆಕಾಯಿ, ಬದನೇಕಾಯಿ, ಬಾಳೆಕಾಯಿ, ಮೆಂತೆ, ಬಸಳೆ ಇನ್ನಿತರ ಸೊಪ್ಪು, ಹೆಬ್ಬಲಸು ಇತ್ಯಾದಿಗಳಲ್ಯಾವುದನ್ನಾದರೂ ಬಳಸಿ ಚಟ್ಟಿ ಮಾಡಬಹುದು.
ಕೆಸುವಿನ ಉಪಯೋಗ ಬರೀ ಪತ್ರೊಡೆಗೆ ಮೀಸಲು ಎಂದು ನೀವು ತಿಳಿಯಬೇಕಾಗಿಲ್ಲ. ಅದರ ಎಲೆಯ ಚಟ್ನಿಯನ್ನೂ, ದಂಟಿನ ಹುಳಿಯನ್ನೂ, ಗಡ್ಡೆಯ ಹಪ್ಪಳವನ್ನೂ ಮಾಡಬಹುದು. ಎಲ್ಲವನ್ನೂ ಒಮ್ಮೆಲೇ ಪ್ರಯೋಗಿಸಿ ನಿಮಗೆ ಅಜೀರ್ಣವಾಗುವ ಸಂಭವ ಇರುವುದರಿಂದ ಅವನ್ನು ಮುಂದಿನ ತರಗತಿಯಲ್ಲಿ ನೋಡೋಣ.
Note: Copied from http://palachandra.blogspot.com
No comments:
Post a Comment