Wednesday, October 28, 2009
ನಮ್ ಹುಡುಗರು ವಯಸ್ಸಿಗೆ ಬಂದಿದ್ದಾರೆ! :)
ನಮ್ಮ ವಾರಗೆಯ ಹುಡುಗರಿಗೆ ಇದೊಂಥರಾ ಸಂಕ್ರಮಣದ ಕಾಲ. ಸಂಕಷ್ಟದ ಕಾಲ ಅಂತಲೂ ಹೇಳಬಹುದು. ವೃಶ್ಚಿಕ ರಾಶಿಗೆ ಚಂದ್ರನ ಪ್ರವೇಶವಾಗಿದೆ. ಶುಕ್ರ ಆರನೇ ಮನೆಯಿಂದ ಏಳನೇ ಮನೆಗೆ ಕಾಲಿಡುತ್ತಿದ್ದಾನೆ. ಅತ್ತ ಶನಿಯೂ ಏಳನೇ ಮನೆಗೇ ದಾಟಲಾಗುತ್ತದಾ ನೋಡುತ್ತಿದ್ದಾನೆ. ರಾಹು ಕೇತುಗಳು ಯಾವಾಗ ಯಾರನ್ನು ಯಾವ ಮನೆಯಲ್ಲಿ ಆಕ್ರಮಿಸುವುದು ಎಂದು ಹೊಂಚುಹಾಕುತ್ತಿವೆ. ಒಟ್ಟಾರೆ ಹೇಳಬೇಕೆಂದರೆ ’ಟೈಮ್ ಬಂದಿದೆ’. ಹ್ಮ್.. ಹೌದು..ಒಬ್ಬೊಬ್ಬರಿಗೇ ಮನೆಯಲ್ಲಿ ಮಾತುಗಳು ಕೇಳಿಬರುತ್ತಿವೆ. ಮಗ ವಯಸ್ಸಿಗೆ ಬಂದಿದ್ದಾನೆ !
ಮೊದಲನೇ ಕೆಟಗರಿಯಲ್ಲಿ ಈ ವರ್ಷದಲ್ಲೇ ಕೆಲವು ಗೆಳೆಯರ ಮದುವೆ ಆಗಿಹೋಯಿತು. ಲವ್ ಮಾಡಿಕೊಂಡವರು, ಮನೆಯಲ್ಲಿ ಹಿರಿಯ ಮಗನಾಗಿದ್ದವರು, ಮನೆಯಲ್ಲಿ ಅಪ್ಪ ಅಮ್ಮಂದಿರಿಗೆ ವಯಸ್ಸಾಗಿ ಮನೆಗೆ ಸೊಸೆ ಬೇಕು ಅನ್ನಿಸಿದವರು, ಇವ್ಯಾವುದೂ ಇಲ್ಲದೇ ಹಾಗೇ ಸುಮ್ಮನೇ ಮದುವೆ ಬೇಕು ಎನಿಸಿದವರು ಮುಂತಾದ ಕೆಲವರು ಜೋಡಿ ಜೀವಗಳಾದರು. ಈ ವರ್ಷದಿಂದ ಹುಡುಕಾಟ ಶುರುಮಾಡಿದರೆ ಮುಂದಿನ ವರ್ಷಕ್ಕಾದರೂ ಮದುವೆಯಾಗಬಹುದು ಎಂದು ಶುರುಮಾಡಿದ ಕೆಲವರಿಗೆ ಬೇಗನೆ ಹುಡುಗಿ ಸಿಕ್ಕು ಮದುವೆ ಊಟ ಹಾಕಿಸಿಬಿಟ್ಟರು. ಯಾವಾಗಲೂ ಜೊತೆಗೇ ಓತ್ಲಾ ಹೊಡೆಯುತ್ತಿದ್ದವನು ನಾಳೆ ಸಿಗ್ತೀಯಾ ಅಂತ ಕೇಳಿದರೆ "ಸ್ವಲ್ಪ ಕೆಲಸ ಇದೆ ಕಣೋ ಬರಕ್ಕಾಗಲ್ಲ" ಅನ್ನುತ್ತಾನೆ. ಹೀಗೆ ಸಿಕ್ಕು ಮಾತಾಡುತ್ತಿದ್ದಾಗ ಫೋನ್ ಬಂದು "ಇಲ್ಲೇ ಇದ್ದೀನಿ, ಹತ್ತು ನಿಮಿಷ, ಬಂದೆ" ಅಂದರೆ ಆಕಡೆ ಇರುವುದು ಹೈಕಮಾಂಡೇ ಸೈ.
ಇತ್ತೀಚೆಗಂತೂ ಗೆಳೆಯರು ಸಿಕ್ಕಾಗ ಕೆಲವು ಕುಶಲ ಮಾತುಕತೆಗಳಾದ ಮೇಲೆ ಮಾತು ಮದುವೆಯ ಕಡೆಗೇ ಹೊರಳುತ್ತದೆ. ಹುಡುಗಿ ನೋಡ್ತಾ ಇದ್ದಾರಾ? ಮದುವೆ ಸೆಟ್ಲಾಯ್ತಾ? ಯಾವಾಗ ಮದುವೆ ಇತ್ಯಾದಿ ಮಾತುಗಳು ಸಾಮಾನ್ಯವಾಗಿವೆ. ಸದ್ಯಕ್ಕೆ ಖಾಲಿಯಾಗಲು ಶುರುವಾಗಿರುವ ನಮ್ಮ ಬ್ಯಾಚಿನ ಹುಡುಗರು ಮುಂದಿನ ವರ್ಷದ ಬೇಸಿಗೆಯಲ್ಲಂತೂ ಮಾರ್ಕೆಟ್ ನಲ್ಲಿ ಹಾಟ್ ಕೇಕ್ ಗಳು. ಮುಂದಿನ ವರ್ಷ ಮುಗಿಯುವುದರೊಳಗಾಗಿ ಅರ್ಧದಷ್ಟು ಜನ ಖಾಲಿಯಾಗಿರುತ್ತಾರೆ. ಅದರ ಮುಂದಿನ ವರ್ಷದೊಳಗಂತೂ ಫುಲ್ ಸ್ವೀಪ್. ಇನ್ನು ನಮ್ಮ ವಾರಗೆಯ ಹುಡುಗಿಯರಂತೂ ಸೋಲ್ಡ್ ಔಟ್ ಆಗಿ ಹೋಗಿ ಎಲ್ಲರೂ ಆಂಟಿಯರಾಗಿಬಿಟ್ಟಿದ್ದಾರೆ! ಆರ್ಕುಟ್ಟಿನ ಆಲ್ಬಮ್ಮಿನಲ್ಲಿ ಮುದ್ದು ಮುಖದ ಮಗುವಿನ ಫೋಟೋಗಳು ಅಪ್ ಲೋಡ್ ಆಗಲಾರಂಭಿಸಿವೆ!
ಎರಡನೇ ಕೆಟಗರಿಯಲ್ಲಿ ಈಗಾಗಲೇ ಹುಡುಗಿ ನಿಕ್ಕಿಯಾಗಿರುವವರು, ನಿಶ್ಚಿತಾರ್ಥ ಆಗಿರುವವರು, ಮದುವೆ ಮಹೂರ್ತ ಫಿಕ್ಸ್ ಆದವರು ಇದ್ದಾರೆ. ಮಹೂರ್ತ ಫಿಕ್ಸ್ ಆದವರು ಮದುವೆ ಆಮಂತ್ರಣದ ಪತ್ರಿಕೆ ಮಾಡಿಸುವ ತಯಾರಿಯಲ್ಲಿ, ಹಂಚುವ ಕೆಲಸದಲ್ಲಿ ತೊಡಗಿದ್ದಾರೆ. ಈ ನವೆಂಬರ್ ನಲ್ಲೇ ಸುಮಾರಷ್ಟು ವಿಕೆಟ್ಟುಗಳು ಬೀಳಲಿವೆ. ಹುಡುಗಿ ಫಿಕ್ಸ್ ಆಗಿರುವವರು ಸದ್ಯಕ್ಕೆ ಫೋನಿನಲ್ಲಿ ಬಿಜಿ ಬಿಜಿ. ಫೋನ್ ಕಾಲ್ ಬಂದೊಡನೆ ಅವರ ದನಿ ಬದಲಾವಣೆಯಲ್ಲೇ ಗೊತ್ತಾಗಿ ಬಿಡುತ್ತದೆ ಅದು ಯಾರ ಫೋನ್ ಎಂದು. "ಸರಿ, ನೀನು ಹೋಗಪ್ಪ" ಎಂದು ನಾವೇ ಕಳಿಸಿಕೊಡುತ್ತೇವೆ. ಅವರ ರಾತ್ರಿ ಕಾರ್ಯಾಚರಣೆಯೂ ಜೋರಾಗಿ ನೆಡೆಯುತ್ತಿರುತ್ತದೆ. ಇಷ್ಟು ಗಂಟೆಯಿಂದ ಇಷ್ಟು ಗಂಟೆಯವರೆಗೆ ಟೈಮ್ ಸ್ಲಾಟ್ ಅದಕ್ಕೆಂದೇ ಮೀಸಲಾಗಿದೆ. ಆದರೆ ಆ ಸ್ಲಾಟ್ ಮೀರಿಹೋಗುವುದೇ ಹೆಚ್ಚು. ಫೋನಿಗಂಟಿಕೊಂಡ ಹುಡುಗನಿಗೆ ಸದ್ಯಕ್ಕೆ ಕೆಲಸ, ಊಟ, ಇನ್ನಿತರ ಕೆಲಸಗಳೆಡೆಗೆ ಒಲವಿಲ್ಲ. ಟೆರೇಸು, ಆಫೀಸಿನ ಕಾನ್ಫರೆನ್ಸ್ ರೂಮು, ಬಾಗಿಲು ಹಾಕಿಕೊಂಡ ಕೋಣೆ ಎಲ್ಲೆಂದರಲ್ಲಿ ಚಂದಾದಾರ ಕಾರ್ಯನಿರತವಾಗಿದ್ದಾನೆ ! ಹುಡುಗಿ ಇದೇ ಊರಿನಲ್ಲಿದ್ದರೆ ವೀಕೆಂಡಿಗೆ ಬೆಳಗ್ಗೆ ಮಾಯವಾದ ಹುಡುಗ ರಾತ್ರಿ ಬಂದಾಗ "ಎಲ್ಲಿಗೆ ಹೋಗಿದ್ಯೋ?" ಅಂದರೆ ಸುಮ್ಮನೇ ನಗುತ್ತಾನೆ. ಮೊದಲು ಯಾವುದೋ ಸಿಕ್ಕಿದ ಅಂಗಿ ನೇತಾಕಿಕೊಂಡು ಊರು ಸುತ್ತುತ್ತಿದ್ದವನು ಈಗ ಸ್ವಲ್ಪ ಟ್ರಿಮ್ ಆಗಿದ್ದಾನೆ.
ಮೂರನೇ ಕೆಟಗರಿಯಲ್ಲಿ, ಸದ್ಯಕ್ಕೆ ನೆಟ್ ವರ್ಕ್ ಫ್ರೀ ಇರುವ ಗೆಳೆಯರ ಹುಡುಗಿ ಹುಡುಕಾಟ ಶುರುವಾಗಿದೆ. ಅಪ್ಪ ಅಮ್ಮ, ಬಂಧುಗಳ ಕಡೆಯಿಂದ ’ಒಳ್ಳೆಯ’ ಹುಡುಗಿಯರ ಸಮಾಚಾರ ಬಂದು ತಲುಪುತ್ತದೆ. ಜಾತಕ, ಫೊಟೋಗಳು ಕೈಸೇರುತ್ತಿವೆ, ಕೈಬದಲಾಗುತ್ತಿವೆ. ಇಂಟರ್ವ್ಯೂಗಳು ನೆಡೆಯುತ್ತಿವೆ. ಯಾವ ಹಬ್ಬವೂ ಇಲ್ಲದೇ ಸುಮ್ಮನೇ ಊರಿಗೆ ಹೊರಟ ಎಂದರೆ ಹುಡುಗ ಚಾ, ಉಪ್ಪಿಟ್ಟು ಸಮಾರಾಧನೆಗೇ ಹೋಗಿದ್ದಾನೆ ! ಹುಡುಗಿಯರ ಡಿಮಾಂಡುಗಳು, ಅವರು ಹಾಕುವ ಕಂಡೀಷನ್ ಗಳನ್ನು ಕೇಳಿದರೆ ಭಯವಾಗುತ್ತದೆ ಅನ್ನುತ್ತಾರೆ. ಕೆಲವರು ಯಾಕೋ ವ್ಯವಾರ ಕುದುರ್ಲಿಲ್ಲ ಅಂತ ವಾಪಾಸ್ಸು ಬಂದರೆ ಕೆಲವರು ಸಿಹಿ ಸುದ್ದಿ ಕೊಟ್ಟು ಎರಡನೇ ಕೆಟಗರಿಗೆ ಭಡ್ತಿ ಪಡೆಯುತ್ತಿದ್ದಾರೆ.
ನಾಲ್ಕನೇ ಕೆಟಗರಿಯಲ್ಲಿ, ಮನೆಯಲ್ಲಿ ಮದುವೆಯಾಗಬೇಕಾದ ಅಕ್ಕ, ಅಣ್ಣ, ಅಥವಾ ತಂಗಿ ಇರುವವರು, ’ಈಗಲೇ ಬೇಡ ಇರಿ’ ಎಂದು ಅಪ್ಪ ಅಮ್ಮರಿಗೆ ತಾಕೀತು ಮಾಡಿದವರು, ’ಸದ್ಯಕ್ಕೆ ಬೇಡ’ ಅನ್ನಿಸಿ ಸುಮ್ಮನಿರುವವರು, ಯಾವುದೇ ರೀತಿಯ ಒತ್ತಡ ಇಲ್ಲದವರು. ಅವರಿಗೆಲ್ಲಾ ತಮ್ಮೊಳಗೇ ಬಿಸಿ ಹತ್ತಿಕೊಳ್ಳದಿದ್ದರೂ ಸುತ್ತಮುತ್ತಲಿನ ಕಾವು ತಾಗುತ್ತಿದೆ, ತಳಮಳಗಳಾಗುತ್ತಿವೆ.
ಎಂತ ಹುಡುಗಿ ಹುಡುಕಿಕೊಳ್ಳಬೇಕು? ಗೊಂದಲ. ಅದಕ್ಕೂ ಮೊದಲು ತನ್ನ ಬಗ್ಗೆ ತನಗೇ ಗೊಂದಲ. ಈಗಲೇ ಮದುವೆಯಾಗಿಬಿಡಬೇಕಾ, ಅಗತ್ಯವಿದೆಯಾ? ತನಗೊಂದು ಸರಿಯಾದ ಕೆಲಸವಿದೆಯಾ, ಇದ್ದರೂ ಗಟ್ಟಿಯಿದೆಯಾ, ಬರುವ ಸಂಬಳ ಸಾಲುತ್ತದಾ? ಮದುವೆಯಾಗಿ ಸಂಸಾರ ನಿಭಾಯಿಸಬಲ್ಲ ಜವಾಬ್ದಾರಿ ಬಂದಿದೆಯಾ? ಅದೇನೋ ಮದುವೆಯಾದರೆ ಜವಾಬ್ದಾರಿ ತಾನಾಗೇ ಬರುತ್ತದಂತೆ. ಇಂದ್ರ ಚಂದ್ರ ಎಂದುಕೊಂಡು ಬಂದ ಹುಡುಗಿಗೆ ಇವನನ್ನು ಯಾಕಾದರೂ ಕಟ್ಟಿಕೊಂಡೆ ಎಂಬಂತಾಗಬಾರದಲ್ಲ. ಅದಕ್ಕೂ ಮೊದಲು ಹುಡುಗಿ ತನ್ನನ್ನು ಒಪ್ಪಿಕೊಳ್ಳಬೇಕಲ್ಲ. ಬರೀ ವಯಸ್ಸಾಗಿಬಿಟ್ಟರೆ ಸಾಕಾ? ಮದುವೆಯಾಗಲು ತಯಾರಿದ್ದೇನೆ ಅನ್ನಲಿಕ್ಕಾದರೂ ಒಂದು ಮಟ್ಟಿಗಿನ ಅರ್ಹತೆ ಬೇಕಲ್ಲ..... ಮುಂದುವರೆಯುತ್ತವೆ ಗೊಂದಲಗಳು. ಹುಡುಗಿಯ ರೂಪ ಕಾಣುತ್ತದೆ, ಗುಣ ಕಾಣುವುದಿಲ್ಲ, ಹುಡುಗಿಯ ಮನೆತನ ನೋಡುವುದಾ? ಜಾಸ್ತಿ ಓದಿದವಳು ಬೇಕಾ? ಕೆಲಸದಲ್ಲಿರುವವಳು ಬೇಕಾ? ಮಾವನ ಮನೆ ಕಡೆ ’ಚೆನ್ನಾಗಿರಬೇಕು’ ಇದು ಕೆಲವು ಹುಡುಗರ ಆಸೆ. ಈ ನಗರಗಳಲ್ಲಿ ನಾವೊಬ್ಬರೇ ದುಡಿದರೆ ಸಾಕಾಗೋದಿಲ್ಲ, ಅವಳೂ ಕೆಲಸಕ್ಕೆ ಹೋಗುತ್ತಿರಬೇಕು ಇದು ಇನ್ನು ಹಲವರ ಅಭಿಪ್ರಾಯ. ಬೇರೆ ಯಾವ ಕೆಲಸದಲ್ಲಿದ್ದರೂ ಓ.ಕೆ , ಆದರೆ ಈ ಐ.ಟಿ. ಹುಡುಗೀರು ಮಾತ್ರ ಖಂಡಿತ ಬೇಡ, ಇದು ಮತ್ತೂ ಕೆಲವರ ದೃಢ ನಿರ್ಧಾರ. ಕಾಲ್ ಸೆಂಟರಿನವರಂತೂ ದೂರ ದೂರ. ರೂಪ, ಹಣ, ಹಿನ್ನೆಲೆ, ಮನೆತನ, ದುಡಿಮೆಗಿಂತ ನನಗಂತೂ ಬೇಕಾಗಿರುವುದು ಒಂದು ’ಡೀಸೆಂಟ್ ಹುಡುಗಿ’ ಎನ್ನುವುದು ಸಾಮಾನ್ಯ. ಇದೆಲ್ಲಾ ತಲೆಬಿಸಿಯೇ ಬೇಡ ಎಂದು ಅಪ್ಪ ಅಮ್ಮನಿಗೇ ಎಲ್ಲಾ ಬಿಟ್ಟು ಕೆಲವರು ಆರಾಮಾಗಿದ್ದಾರೆ. ಅವರು ಕೈ ತೋರಿಸಿದವರಿಗೇ ಇವರದ್ದೂ ಜೈ. ಇದೆಲ್ಲುದರ ಜೊತೆಗೆ ಹುಡುಗಿಯರು ಬಯಸುವುದು ಏನನ್ನು, ಎಂತವರನ್ನು ಎಂಬ ನಾನಾ ಉತ್ತರಗಳ, ಉತ್ತರಗಳಿಲ್ಲದ, ಇದ್ದರೂ ಸಿಗದ, ಸಿಕ್ಕರೂ ಅರ್ಥವಾಗದ, ಅರ್ಥವಾದರೂ ಸ್ಪಷ್ಟವಾಗದ ಪ್ರಶ್ನೆ ಇದ್ದೇ ಇರುತ್ತದೆ.. ಗೆಳೆಯನೊಬ್ಬ ದಾರಿಯಲ್ಲಿ ಸಿಗುವ ಹುಡುಗಿರನ್ನೆಲ್ಲಾ ಕಣ್ಣಲ್ಲೇ ಅಳೆಯಲು ಶುರುಮಾಡಿದ್ದಾನೆ. ಯಾರನ್ನೋ ತೋರಿಸಿ ಇವಳ ತರಹ ಇದ್ರೆ ಓ.ಕೆ. ಅನ್ನುತ್ತಾನೆ. ನಾವೂ ಕೂಡ ಕಂಡ ಹುಡುಗಿಯರನ್ನೆಲ್ಲಾ ತೋರಿಸಿ "ಇದು ಹೆಂಗೋ? ನಿಂಗೆ ಓ.ಕೆ. ನಾ?" ಅನ್ನುತ್ತೇವೆ. ಆಪ್ತ ಗೆಳೆಯರು ಮಾತಿಗೆ ಕುಳಿತಾಗ ಹುಡುಗಿಯರ ಬಗ್ಗೆ, ಹೆಂಡತಿ ಬಗ್ಗೆ, ಹೇಗಿರಬೇಕು ಎನ್ನುವುದರ ಬಗ್ಗೆ, ಯಾರಾದರೆ ಯಾವರೀತಿ advantage ಮತ್ತು disadvantage ಎನ್ನುವುದರ ಬಗ್ಗೆ, ಮುಂದೆ ಹೇಗೆ ಎಂಬ ಬಗ್ಗೆ ಚರ್ಚೆ ಬಂದು ಹೋಗುತ್ತದೆ.. (ಅದು ಹುಡುಗರ ಲೋಕದ ಸೀಕ್ರೇಟುಗಳಾದ್ದರಿಂದ ವಿವರಗಳನ್ನು ಇಲ್ಲಿ ಬರೆಯುವಂತಿಲ್ಲ! :)) ಕೊನೆಗೆ ಏನೇ ನೋಡಿ, ಏನೇ ಲೆಕ್ಕಾಚಾರ ಹಾಕಿ ಮದುವೆಯಾದರೂ ’ನಿಜರೂಪ’ ದರ್ಶನ ಮದುವೆಯಾದ ಅನಂತರವೇ ಎಂಬ ಸತ್ಯದ ಅರಿವು ಎಲ್ಲರಲ್ಲಿದೆ! ಜೊತೆಗೆ ಮದುವೆಯಾಗುವವಳು ಸರಿಯಾಗಿ ಸೆಟ್ ಆಗ್ತಾಳೋ ಇಲ್ವೋ ಎಂಬ ಚಿಂತೆ!
ಈಗಾಗಲೇ ಮದುವೆಯಾದವರಿಗೆ, ದೊಡ್ಡವರಿಗೆ ಇದೆಲ್ಲಾ ತಮಾಷೆ ಎನಿಸಬಹುದು. ಇದುವರೆಗೆ ಹೇಳಿದ್ದೆಲ್ಲಾ ಏನಿದ್ದರೂ ತೀರ ಹೊರನೋಟ ಮಾತ್ರ. ಮನಸಿನ ಒಳಗಿನ ತಾಕಲಾಟಗಳು ನೂರು ನೂರು. ಮುಂದಿನ ತಿಂಗಳು ಮದುವೆ ಇರುವ ಗೆಳೆಯನೊಬ್ಬನಿಗೆ "ನೀವು ಸದ್ಯದಲ್ಲೇ ಮದ್ವೆ ಆಗ್ತಾ ಇದ್ದೀರ, ಏನನ್ನಿಸ್ತಿದೆ ನಿಮ್ಗೆ ?’ ಅಂತ ಟೀವಿ ನೈನ್ ಸ್ಟೈಲ್ ನಲ್ಲಿ ಕೇಳಿದಾಗ ಅವನು ಉತ್ತರಿಸಿದ್ದು ಹೀಗೆ. " ಟೆನ್ಷನ್ ಆಗ್ತಾ ಇದೆ, ಜೊತೆಗೆ ನನ್ನ ಸ್ವಾತಂತ್ರ್ಯ ಕಳೆದುಹೋಗ್ತಾ ಇದೆ ಅನ್ನಿಸ್ತಿದೆ, ಆದರೆ ಆ ಕಳ್ಕೊಳದ್ರಲ್ಲೂ ಒಂಥರಾ ಸುಖ ಇದೆ!" .
ಅದಕ್ಕೇ ಹೇಳಿದ್ದು, ಇದೊಂಥರಾ ಸಂಕ್ರಮಣದ ಜೊತೆಜೊತೆಗೇ ಸಂಕಷ್ಟದ ಕಾಲ!
No comments:
Post a Comment